ಯಸುನರಿ, ಕವಬಟ
  	1899-1972. ಜಪಾನಿನ ಪ್ರಸಿದ್ಧ ಕಾದಂಬರಿಕಾರ. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಜಪಾನಿ ಸಾಹಿತಿ. 1899 ಜೂನ್ 11 ರಂದು ಒಸಾಕಾದಲ್ಲಿ ಜನಿಸಿದ. ಮಗುವಾಗಿದ್ದಾಗಲೇ ತನ್ನ ತಾಯಿ ತಂದೆಯರನ್ನು ಕಳೆದುಕೊಂಡ. ತುರುವಾಯ ಕೆಲವೇ ವರ್ಷಗಳಲ್ಲಿ ತನ್ನನ್ನು ಬೆಳೆಸಿದ ಅಜ್ಜಿ ತಾತರನ್ನೂ ಕಳೆದುಕೊಂಡು ತಬ್ಬಲಿಯಾದ. ಬೆಳೆದು ದೊಡ್ಡವನಾದ ಮೇಲೂ ಒಂಟಿಯಾಗಿಯೇ ಬಾಳಿದ. ಈತನ ಬಾಲ್ಯ ಮತ್ತು ಯೌವನದ ದಿನಗಳಲ್ಲಿಯ ತಬ್ಬಲಿತನ ಹಾಗೂ ಕುಟುಂಬದಲ್ಲಿನ ಹಲವು ಸಾವುಗಳಿಂದುಂಟಾದ ಖಿನ್ನಿತ ಇವನ ಸಾಹಿತ್ಯದಲ್ಲಿ ವ್ಯಾಪಿಸಿದೆ.

  	ಟೋಕಿಯೊದ ಫಸ್ಟ್ ಹೈಯರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಕವಬಟ 1924 ರಲ್ಲಿ ಟೋಕಿಯೊ ಇಂಪಿರಿಯಲ್ ವಿಶ್ವವಿದ್ಯಾಲಯದಲ್ಲಿ ಜಪಾನಿ ಹಾಗೂ ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಾಸಮಾಡಿ ಪದವಿ ಪಡೆದ. ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ. ಈತನ ಮೊದಲ ಕೃತಿ `ಇಜು ನರ್ತಕಿ' (ದಿ ಇಜು ಡ್ಯಾನ್ಸರ್) 1926 ರಲ್ಲಿ (ಅನುವಾದ 1955) ಪ್ರಕಟಣೆಗೊಂಡಿತು. ಟೋಕಿಯೊದ ಪ್ರೌಢಶಲೆಯ ವಿದ್ಯಾರ್ಥಿಯೊಬ್ಬ ಅಲೆದಾಡುವ ನರ್ತಕಿಯೊಬ್ಬಳ ಜೊತೆಯಲ್ಲಿದ್ದಾಗ ಕ್ಷಣಕಾಲ ಮನಶಾಂತಿ ಪಡೆಯುವ ಕಥೆ ಇದರಲ್ಲಿದೆ. ಆತ್ಮಕಥಾರೂಪದಲ್ಲಿರುವ ಇದರ ಭಾಷೆಯ ನವೀನತೆ ಕೃತಿಯನ್ನು ಭಾವತೀವ್ರತೆಯಿಂದ ಪಾರುಮಾಡಿದೆ. ಕಿರು ಸ್ವಭಾವ ಚಿತ್ರಣಗಳನ್ನೊಳಗೊಂಡ ಪಮ್-ಆಫ್-ದಿ-ಹ್ಯಾಂಡ್ ಸ್ಟೋರಿಸ್ ಭಾವ ಗೀತಾತ್ಮಕವಾಗಿದ್ದು `ಹೈಕು ವಿನ ಸ್ವರೂಪವನ್ನು ಒಲಗೊಂಡಿದೆ. ಆರಂಭದ ಇವೆರಡು ಕೃತಿಗಳು ಕವಬಟನಿಗೆ ಕೀರ್ತಿಯನ್ನು ತಂದುಕೊಟ್ಟವು. 1929-30 ರಲ್ಲಿ ಧಾರವಾಹಿಯಾಗಿ ಪ್ರಕಟಣೆಗೊಂಡ ದಿ ಸ್ಕಾರ್ಲೆಟ್ ಗ್ಯಾಂಗ್ ಆಫ್ ಅಸಕುಸ (ಅಸಕಸು ಕುರೆನಾಯಿಡಾನ್) ಅಪೂರ್ವ ಕೃತಿ. ಅಸಕುಸ ಬಹುಮಟ್ಟಿಗೆ ಜನರಿಗೆ ಭೋಗ ಜೀವನದ ತಾಣವಾಗಿದ್ದರೆ ಕವಬಟನಿಗೆ ಅದು ನಿರಾಶ್ರಿತರ ಹಾಗೂ ಒಂಟಿಜೀವಿಗಳ ಸ್ಥಳವಾಗಿದೆ. ಇದರಲ್ಲಿ ತನ್ನನ್ನು ಆಕರ್ಷಿಸಿದ ಟೋಕಿಯೊದ ಭಾಗಗಳನ್ನು `ದೂರ ಸಾಗರದಲ್ಲಿರುವ ದ್ವೀಪಗಳು ಎಂದು ವರ್ಣಿಸಿದ್ದಾನೆ.

   1935 ರಲ್ಲಿ ಆರಂಭಿಸಿ 1947ರ ಹೊತ್ತಿಗೆ ಮುಕ್ತಾಯಗೊಂಡ ಹಿಮದೇಶ (ಸ್ನೊಕಂಟ್ರಿ, ಅನುವಾದ 1956) ಕವಬಟನ ಪ್ರಮುಖ ಕೃತಿ. ಟೋಕಿಯೊದ ಹವ್ಯಾಸಿಯೊಬ್ಬ ಮಧ್ಯಜಪಾನಿನ ಬಿಸಿನೀರ ಬುಗ್ಗೆಯ ತಾಣಕ್ಕೆ ಹಲವು ಸಲ ಭೇಟಿ ನೀಡಿದಾಗ ಅಲ್ಲಿನ ಗೇಷಾ ಹುಡುಗಿಯೊಡನೆ ಸ್ನೇಹ ಬೆಳೆಸುತ್ತಾನೆ. ಆ ಸ್ನೇಹ ಸಹಜವಾಗಿ ಪ್ರೀತಿ ವಾತ್ಸಲ್ಯವಾಗಿ ಬೆಳೆಯಲಾರದೆ ಕಡೆಗೆ ಅವನು ತನ್ನ ಸ್ವಂತ ಸ್ಥಳಕ್ಕೆ ವಾಪಾಸಾಗಲು ನಿರ್ಧರಿಸುತ್ತಾನೆ. ಈ ಕಥೆಯಲ್ಲಿ ಬರುವ ಗೇಷಾ ತರುಣಿಯ ಪಾತ್ರ ಕವಬಟ ಸೃಷ್ಟಿಸಿರುವ ಪಾತ್ರಗಳ ಪೈಕಿ ಪರಿಪೂರ್ಣತೆಗೆ ಅತ್ಯಂತ ಸಮೀಪವಾದದ್ದಾಗಿದೆ.

  	ಸಾವಿರ ಕೊಕ್ಕರೆಗಳು (ಥೌಸಂಡ್ ಕ್ರೇನ್ಸ್, ಅನುವಾದ 1958) 1951 ರಲ್ಲಿ ಪ್ರಕಟಣೆಗೊಂಡಿತು. ಸಾಂಪ್ರದಾಯಿಕ ಚಹಾ ಸಮಾರಂಭದ ಸುತ್ತ ಹೆಣೆದ ಕಥೆ ಈ ಕಾದಂಬರಿಯ ವಸ್ತುವಾಗಿದೆ. ಯುವಕನೊಬ್ಬ ತೀರಿಕೊಂಡ ತನ್ನ ತಂದೆಯ ಪ್ರಿಯತಮೆಯ ಬಗ್ಗೆ , ಅವಳ ಮರಣಾನಂತರ ಅವಳ ಬಗ್ಗೆ ಹೊಂದಿದ್ದ ಪ್ರೀತಿಯ ಬಗೆಗಿನ ಕಥೆ ಇಲ್ಲಿ ನಿರೂಪಿತವಾಗಿದೆ.

  ಪರ್ವತದ ಧ್ವನಿ (ದಿಸೌಂಡ್ ಅಫ್ ಮೌಂಟೇನ್) ಕಮಕುರದ ವೃದ್ಧನೊಬ್ಬನ ಜೀವನದ ಕಥೆಯನ್ನು ಕುರಿತ ಕಾದಂಬರಿ. ಇದು ಕೂಡ 1949 ರಲ್ಲಿ ಪ್ರಾರಂಭವಾಗಿ 1954 ರಲ್ಲಿ (ಅನುವಾದ 1970) ಮುಕ್ತಾಯ ಕಂಡಿತು. 1960-61 ರಲ್ಲಿ ಧಾರವಾಹಿಯಾಗಿ ಪ್ರಕಟಣೆಗೊಂಡ ಹೌಸ್ ಆಫ್ ಸ್ಲಿಪಿಂಗ್ ಬ್ಯೂಟೀಸ್ ಎಂಬ ಕಾದಂಬರಿ ಕವಬಟನ ಇತರ ಕಾದಂಬರಿಗಳಂತೆಯೇ ಜೀವನದ ಒಂಟಿತನ, ಏಕಾಂತತೆ, ಅರ್ಥ ಹೀನ ಕ್ರಿಯೆಯಲ್ಲಿ ಬದುಕು ಹೇಗೆ ಕಳೆದುಹೋಗುತ್ತದೆ ಎಂಬುದನ್ನು ಸೊಗಸಾಗಿ ಚಿತ್ರಿಸುತ್ತದೆ. 1954ರ ವರೆಗೆ ಮುಕ್ತಾಯವಾಗಿರದ ದಿ ಮಾಸ್ಟರ್ ಆಫ್ ಗೋ ಕಾದಂಬರಿ 1935 ರಲ್ಲಿ ವಾಸ್ತವವಾಗಿ ನಡೆದ ಗೋ ಎಂಬ ಒಂದು ರೀತಿಯ ಚೆಸ್ ಸ್ಪರ್ಧೆಯ ಬಗೆಗೆ ವಿವರಿಸುತ್ತದೆ.

  ಕವಬಟನ ನೂರಕ್ಕೂ ಹೆಚ್ಚು ಸಣ್ಣಕಥೆಗಳನ್ನು ರಚಿಸಿದ್ದಾನೆ. ಇವುಗಳ ಪೈಕಿ ಹಲವನ್ನು ತನ್ನ ಇಪ್ಪತ್ತರ ಹರೆಯದಲ್ಲಿ ರಚಿಸಿದ್ದಾನೆ. ಈ ಕಥೆಗಳು ಕವಬಟನಿಗೆ ತುಂಬ ಪ್ರಿಯವಾಗಿದ್ದವು. ಇವು ಈತನ ಯೌವನದ ಕಾವ್ಯ. `ಅನೇಕ ಸಾಹಿತಿಗಳು ತಾವು ಯುವಕರಾಗಿದ್ದಾಗ ಕಾವ್ಯ ರಚಿಸುತ್ತಾರೆ. ನಾನಾದರೋ ಈ ಸಣ್ಣಕಥೆಗಳು, ನೆನಪಿನ ಚಿತ್ರಗಳನ್ನು ರಚಿಸಿದ್ದೇನೆ ' ಎಂದಿದ್ದಾನೆ. ಅನಂತರ ಇವೇ ಕವಬಟನಿಗೆ ಜಿಗುಪ್ಸೆ ಮೂಡಿಸಿದ್ದೂ ಉಂಟು ಎಂಬುದಕ್ಕೆ `ಅವುಗಳಲ್ಲಿ ನನ್ನನ್ನು ನಾನೇ ಕಾಣುವಂತಾಗುವುದರಿಂದ ಅವುಗಳ ಬಗ್ಗೆ ಉದಾಸೀನ ತಾಳದೆ ವಿಧಿಯಿಲ್ಲ ಎಂಬ ಮಾತು ಸಾಕ್ಷಿಯಾಗಿದೆ.

  	ಸಾಹಿತ್ಯ ಪ್ರಚಾರಾತ್ಮಕವಾಗಿರದೆ ಕಲಾತ್ಮಕವಾಗಿರಬೇಕೆಂದು ನಂಬಿದ್ದವನು ಕವಬಟ. ಒಂದುಕ್ಷಣದ ಮನಸ್ಥಿತಿಯನ್ನು ಚಿತ್ರಿಸುವಾಗ ಕವಬಟ ತೋರಿಸುವ ಅಪೂರ್ವ ಗ್ರಹಣಶಕ್ತಿ, ಭಾವತೀವ್ರತೆ ಜಪಾನಿನ ವಿಶಿಷ್ಟ ಕಾವ್ಯಪ್ರಕಾರವಾದ `ಹೈಕು ಬಗೆಗೆ ಈತನಿಗಿದ್ದ ಒಲವನ್ನು ತೋರಿಸುತ್ತದೆ. ಇಂಥ ಅಸ್ಥಿರ ಕ್ಷಣಗಳನ್ನು ಚಿತ್ರಿಸುವಾಗಿನ ತತ್‍ಕ್ಷಣದ ಸಾರ್ಥಕತೆ ಕವಬಟನ ಶೈಲಿಯ ವೈಶಿಷ್ಟ್ಯ. ತಿಳಿಯಾದ ಸ್ಪಷ್ಟ ಭಾಷೆಯಲ್ಲಿ ಕವಬಟ ಬರೆದರೂ ಆ ಪದಗಳ ಹಿಂದಿನ ದ್ವಂದ್ವ ಧ್ವನಿ, ಸಾಂಕೇತಿಕತೆಗಳು ಜಪಾನೀ ಸಂಸ್ಕøತಿ ಸಂಪ್ರದಾಯಗಳ ಹಿನ್ನಲೆಯಲ್ಲಿ ಆಳವಾದ ಅರ್ಥ ಪಡೆಯುತ್ತವೆ. ಕವಬಟ ತನ್ನ ಕೃತಿಗಳಲ್ಲಿನ ಪಾತ್ರವನ್ನು ದೀರ್ಘ ವಿಶ್ಲೇಷಣೆ ಅಥವಾ ನಾಟಕೀಯ ದೃಶ್ಯಗಳ ಮೂಲಕ ಸಮರ್ಥಿಸುವಂತೆ ತೋರಿಸುವುದಕ್ಕಿಂತ ಶೂನ್ಯನೋಟಗಳು, ಚಕಿತಗೊಳಿಸುವ ಸಂಭಾಷಣೆ, ಸೂಕ್ಷ್ಮ ಭಾವಾಭಿವ್ಯಕ್ತಿಗಳ ಮೂಲಕ ಅವುಗಳ ಆಂತರಿಕ ಬದುಕನ್ನು ಹಿಡಿದಿಡುವ ಕಡೆಗೆ ಹೆಚ್ಚಿನ ಒತ್ತು ನೀಡುತ್ತಾನೆ.

  ಕವಬಟ ಯುದ್ಧಕಾಲದಲ್ಲಿ ರಾಷ್ಟ್ರೀಯತೆಯ ಮನೋವೈಕಲ್ಯದಿಂದ ದೂರ ಉಳಿದಿದ್ದ ವಿಶಿಷ್ಟ ವ್ಯಕ್ತಿತ್ವದವನು. ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಈತನ ಉದಾರಮನೋಭಾವ ಸ್ತುತ್ಯರ್ಹವಾದುದು. ಒಕಮೊಟೊ ಕನೊಕೊ (1889-1939), ಇಬುಸೆಮಸುಜಿ (1898), ಮಿಷಿಯ ಯುಕಿಯೊ (1925-70) ಇವರು ಈತನಿಂದ ಪ್ರೋತ್ಸಾಹ ಪಡೆದವರ ಪೈಕಿ ಮುಖ್ಯರಾದವರು. 

  1948 ರಿಂದ 65 ರ ವರೆಗೆ ಕವಬಟ ಜಪಾನಿನ ಪಿ.ಇ. ಎನ್. ಕ್ಲಬ್‍ನ ಅಧ್ಯಕ್ಷನಾಗಿದ್ದ ; ಅನೇಕ ಸಾಹಿತ್ಯ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರನಾಗಿದ್ದ. ಜಪಾನೀ ಸರ್ಕಾರದ ಸಾಂಸ್ಕøತಿಕ ಪ್ರಶಸ್ತಿಯೂ ಈತನಿಗೆ ದೊರಕಿದೆ. ಜಪಾನೀ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿಕೊಡುವುದರಲ್ಲಿ ಕವಬಟನ ಪರಿಶ್ರಮ ವಿಶಿಷ್ಟವಾದುದು. 1968 ರಲ್ಲಿ `ಜಪಾನೀಯರ ಮನೋಭಾವಗಳ ಸಾರಸತ್ತ್ವವನ್ನು ಸೂಕ್ಷ್ಮತಿಸೂಕ್ಷ್ಮವಾಗಿ ವಿವರಿಸುವ ಕಥನ ನೈಪುಣ್ಯಕ್ಕಾಗಿ' ಈತನಿಗೆ ದೊರೆತ ನೊಬೆಲ್ ಬಹುಮಾನ ದೊರೆತಾಗ ಕವಬಟ ಅತಿವಿನಯದಿಂದ `ನನಗೆ ದೊರೆತ ಸನ್ಮಾನ-ಗೌರವಗಳಲ್ಲಿ ಅರ್ಧಭಾಗ ನನ್ನ ಕೃತಿಗಳ ಭಾಷಾಂತರಕಾರರಿಗೆ ಸಲ್ಲಬೇಕು ಎಂದು ನುಡಿದ. ಭಾಷಾಂತರ ಕೂಡ ಸೃಜನಶೀಲವಾದದ್ದು ಎಂದು ಕವಬಟ ನಂಬಿದ್ದ (ಈತನ ಅನೇಕ ಕೃತಿಗಳನ್ನು ಎಡ್ವರ್ಡ್ ಸೈಡೆನ್ ಸ್ವಿಕರ್ ಇಂಗ್ಲಿಷಿಗೆ ಅನುವಾದಿಸಿದ್ದಾನೆ).

  ಏಕಾಂತಪ್ರಿಯನಾಗಿದ್ದ ಕವಬಟ ಕೀರ್ತಿಯ ಶೂನ್ಯತೆಯ ಬಗ್ಗೆ ಟೀಕಿಸಿದ್ದೂ ಉಂಟು. ಅದರೆ ನೊಬೆಲ್ ಬಹುಮಾನ ಪಡೆದ ಅನಂತರ ತನ್ನ ಗೌರವಾರ್ಥ ಏರ್ಪಡಿಸಿದ ಅನೇಕ ಸಮಾರಂಭಗಳು, ಹಾಗೂ ಚಹಾ ಕೂಟಗಳಲ್ಲಿ ಕರ್ತವ್ಯಬದ್ಧನಾಗಿ ಪಾಲುಗೊಂಡ. ಟೋಕಿಯೊದ ಗವರ್ನರ ಹುದ್ದೆಗೆ ಸ್ಪರ್ಧಿಸಿದ್ದ ತನ್ನ ಮಿತ್ರನ ಪರವಾಗಿ 1971 ರಲ್ಲಿ ಸಕ್ರಿಯವಾಗಿ ಪ್ರಚಾರವನ್ನೂ ಮಾಡಿದ್ದ. ವಿಶ್ವದ ಕೀರ್ತಿಗೆ ಪಾತ್ರನಾದ ಸ್ವಲ್ಪ ಸಮಯದಲ್ಲೇ ಕ್ಷೀಣಿಸುತ್ತಿರುವ ಆರೋಗ್ಯ ಮತ್ತು ಪ್ರಾಯಶಃ ಯುಕಿಯೊ ಮಿಷಿಮ ಎಂಬ ತನ್ನ ಗೆಳೆಯನ ಆತ್ಮಹತ್ಯೆಯಿಂದ ಜಿಗುಪ್ಸೆಗೊಂಡ ಕವಬಟ 1972 ಏಪ್ರಿಲ್ 17 ರಂದು ಕಮಕು ಸಮೀಪದ ಜುಷಿ ನಗರದ ತನ್ನ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡ.								

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ